ಆನಂದ ವಿಕಟನ್
	ತಮಿಳು ಜನರ ವಕ್ತಾರ ಎಂದು ಪ್ರಖ್ಯಾತವಾಗಿರುವ ತಮಿಳು ವಾರಪತ್ರಿಕೆ. ಸ್ಥಾಪನೆ 1924. ಪ್ರಸಿದ್ಧ ಸಾಹಿತಿ ಎಸ್.ಎಸ್. ವಾಸನ್ 1929ರಲ್ಲಿ ಅದನ್ನು ವಹಿಸಿಕೊಂಡು ಅದಕ್ಕೆ ಆಕರ್ಷಕ ಸ್ವರೂಪ, ಜನಪ್ರಿಯ ವೈವಿಧ್ಯಗಳನ್ನಿತ್ತು, ಅತ್ಯಧಿಕ ಪ್ರಸಾರವುಳ್ಳದ್ದನ್ನಾಗಿ ಮಾಡಿದರು. ಈ ಶತಮಾನದ ತಮಿಳು ಸಾಹಿತ್ಯ ಪ್ರಪಂಚದಲ್ಲಿ ಧ್ರುವನಕ್ಷತ್ರದಂತೆ ಬೆಳಗಿದ ಶ್ರೇಷ್ಠ ಕಥೆಗಾರ, ಕಾದಂಬರಿಕಾರ, ಪತ್ರಿಕೋದ್ಯಮಿ ಎನಿಸಿದ ಆರ್. ಕೃಷ್ಣಮೂರ್ತಿಯವರ (ಕಲ್ಕಿ) ನೆರವು ದೊರೆತಮೇಲೆ ಪತ್ರಿಕೆಯ ಖ್ಯಾತಿ ಮತ್ತೂ ಹೆಚ್ಚಿ ದಕ್ಷಿಣ ಭಾರತದ ಸಾಹಿತ್ಯ ಮತ್ತು ಸಾಂಸ್ಕøತಿಕ ರಂಗದಲ್ಲಿ ವಿಖ್ಯಾತವಾಯಿತು. ವಿನೋದ, ಪ್ರಹಸನಗಳಲ್ಲಿ `ಪಂಚ್ ನಂತೆ ಉತ್ತಮ ಸ್ಥಾನಗಳಿಸಿತು. ರಾಜಕೀಯ ವ್ಯಂಗ್ಯಚಿತ್ರಗಳ ಪ್ರಕಟಣೆ ಪ್ರಾರಂಭಿಸಿದ ಪ್ರಥಮ ಭಾರತೀಯ ಪತ್ರಿಕೆಗಳಲ್ಲಿ ಇದೂ ಒಂದು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ಸಿಗೆ ಅಚಲನಿಷ್ಠೆಯಿಂದ ಬೆಂಬಲ ನೀಡಿತು. ಈಗಿನ ಸಂಪಾದಕರು ಕೆ ಅಶೋಕನ್.
 												 (ಎಂ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ